ಗೋಕುಲಾಷ್ಟಮಿ 

	ಶ್ರೀಕೃಷ್ಣನ ಜನ್ಮದಿನದಂದು ಹಿಂದೂಗಳು ಆಚರಿಸುವ ಒಂದು ದೊಡ್ಡ ಹಬ್ಬ. ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀಕೃಷ್ಣ ಜಯಂತಿ ಎಂಬ ಹೆಸರುಗಳೂ ಇವೆ. ಕೆಲವರು ಇದನ್ನು ವ್ರತವಾಗಿ ಆಚರಿಸುತ್ತಾರೆ. 

	ದ್ವಾಪರಯುಗಾಂತ್ಯದಲ್ಲಿ ಭೂಭಾರವನ್ನು ಇಳಿಸಲು ಭಗವಂತ ಶ್ರೀಕೃಷ್ಣನಾಗಿ ಹುಟ್ಟಿದ ಕುರುಹಾಗಿ ಈ ಹಬ್ಬವನ್ನು ಮಾಡುತ್ತಾರೆ. ಶ್ರೀಕೃಷ್ಣ ಜನಿಸಿದ್ದು ಮಥುರಾನಗರದಲ್ಲಿ. ತಂದೆಯಾದ ವಸುದೇವ ಕೃಷ್ಣ ಹುಟ್ಟಿದಾಗ ಕಂಸನ ಕಾಕ ದೃಷ್ಟಿಯಿಂದ ಶಿಶುವನ್ನು ಹೇಗೆ ರಕ್ಷಿಸುವುದು ಎಂದು ಯೋಚಿಸತೊಡಗಿದ. ಆಗ ಶಿಶು ತಾನು ಭಗವಂತನ ಅವತಾರವೆಂಬುದನ್ನು ವಸುದೇವನಿಗೆ ಸ್ಪಷ್ಟಪಡಿಸಿ ತನ್ನನ್ನು ನಂದಗೋಕುಲದಲ್ಲಿಟ್ಟು, ನಂದಗೋಪಾಲನಿಗೆ ಅದೇ ಸಮಯದಲ್ಲಿ ಹುಟ್ಟಿದ್ದ ಹೆಣ್ಣು ಶಿಶುವನ್ನು ತನಗೆ ಪ್ರತಿಯಾಗಿ ಮಥುರಾಕ್ಕೆ ತರುವಂತೆ ತಿಳಿಸಿತು. ವಸುದೇವ ಅದರಂತೆಯೇ ಮಾಡಿದ. ವಾಸ್ತವವಾಗಿ ಮಥುರಾದಲ್ಲಿ ಶ್ರೀಕೃಷ್ಣ ಜನಿಸಿದ್ದರೂ ನಂದಗೋಕುಲದಲ್ಲಿ ಅಷ್ಟಮಿಯಂದು ಜನಿಸಿದಂತೆ ಭಾವಿಸುವುದರಿಂದ ಈ ಕೃಷ್ಣಜನ್ಮಾಷ್ಟಮಿಗೆ ಗೋಕುಲಾಷ್ಟಮಿ ಎಂಬ ಹೆಸರಿರುವುದು ಅನ್ವರ್ಥವಾಗಿದೆ. 

	ಪ್ರತಿವರ್ಷದಲ್ಲೂ ಶ್ರೀಕೃಷ್ಣನ ಜನ್ಮದಿನವನ್ನು ನಿಷ್ಕರ್ಷಿಸುವಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಜನ್ಮಮಾಸದ ಜನನ ತಿಥಿಯ ದಿವಸದಲ್ಲಿ ಕೆಲವರೂ ಜನ್ಮ ನಕ್ಷತ್ರದಲ್ಲಿ ಕೆಲವರೂ ಈ ಹಬ್ಬವನ್ನು ಆಚರಿಸುತ್ತಾರೆ. ಈ ಎರಡೂ ಒಂದೇ ದಿವಸದಲ್ಲಿ ಬಂದಾಗ ಯಾವ ವ್ಯತ್ಯಾಸವೂ ಇರುವುದಿಲ್ಲ. ಜನ್ಮಮಾಸದಲ್ಲೂ ಸೌರ-ಚಾಂದ್ರಮಾನ ಭೇದದಿಂದ ಜನ್ಮದಿನ ಬದಲಾಗುತ್ತದೆ. 

	ಕೃಷ್ಣ ಹುಟ್ಟಿದುದು ಸಿಂಹಶ್ರಾವಣಮಾಸದ ಬಹುಳ ಅಷ್ಟಮೀ ಬುಧವಾರ ರಾತ್ರಿ ರೋಹಿಣೀ ನಕ್ಷತ್ರದಲ್ಲಿ. ಚಾಂದ್ರಮಾಸ ಪದ್ಧತಿಯನ್ನನುಸರಿಸುವವರು ಶ್ರಾವಣಮಾಸದ ಕೃಷ್ಣಪಕ್ಷ ಅಷ್ಟಮಿಯ ದಿವಸ ಇದನ್ನು ಆಚರಿಸುತ್ತಾರೆ. ಆಗ ಸಿಂಹಮಾಸವೂ ಸೇರಿದ್ದರೆ ಸೌರ-ಚಾಂದ್ರಮಾನಗಳೆರಡೂ ಕೂಡಿದಂತಾಗುತ್ತದೆ. ಈ ತಿಂಗಳಿನ ಕೃಷ್ಣಾಷ್ಟಮಿಯ ಅರ್ಧರಾತ್ರಿಕಾಲದಲ್ಲಿರುವ ದಿವಸವನ್ನು ಜನ್ಮಾಷ್ಟಮಿ ಎಂದು ಶಾಸ್ತ್ರಕಾರರು ಪರಿಗಣಿಸಿದ್ದಾರೆ. ಆ ದಿವಸ ಉದಯಾದಿ ಅಷ್ಟಮೀ ತಿಥಿ ಇದ್ದು ಕೃತ್ತಿಕಾನಕ್ಷತ್ರ ಇಲ್ಲದಿದ್ದಾಗ ಅದು ಶುದ್ಧ ತಿಥಿ ಆಗುತ್ತದೆ. ಆ ಶುದ್ಧ ತಿಥಿಯ ದಿವಸವೇ ಜನ್ಮಾಷ್ಟಮಿಯನ್ನು ಎಲ್ಲರೂ ಆಚರಿಸುತ್ತಾರೆ. ತಿಥಿ ಪ್ರಧಾನವಾದುದು ಜನ್ಮಾಷ್ಟಮಿ. 

	ನಕ್ಷತ್ರವನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಂಡಿರುವವರು ಉದಯಾದಿ ಅಷ್ಟಮೀ ತಿಥಿ ಇರುವ ದಿವಸ ಉದಯಾದಿ ರೋಹಿಣೀನಕ್ಷತ್ರವೂ ಇದ್ದಲ್ಲಿ ಆ ದಿನದಲ್ಲೇ ಶ್ರೀಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ. ಜನ್ಮಾಷ್ಟಮಿ, ಜಯಂತಿ, ವ್ರತಗಳು ಸಾಮಾನ್ಯವಾಗಿ ಭಿನ್ನವಾಗಿಯೇ ಬರುತ್ತವೆ. ಕೆಲವೊಮ್ಮೆ ಎರಡೂ ಒಂದಾಗಿ ಬರುವುದುಂಟು. ನಕ್ಷತ್ರ ಪ್ರಧಾನವಾದುದು ಜಯಂತಿ, ಇದಕ್ಕೆ ಸಪ್ತಮೀ ಅಥವಾ ಕೃತ್ತಿಕಾನಕ್ಷತ್ರದೊಂದಿಗೆ ಇರದ (ವೇಧೆ ಇರದ) ರೋಹಿಣಿ ನಕ್ಷತ್ರ ಮುಖ್ಯ. ಕೆಲವು ಮೇಳೆ ವೇಧೇ ಇಲ್ಲದ ರೋಹೀಣೀ ನಕ್ಷತ್ರ ದೊರೆಯದಿದ್ದಾಗ ಅಷ್ಟಮೀ-ರೋಹೀಣಿಗಳನ್ನು ಬಿಟ್ಟು ನವಮೀ ಸಹಿತ ಮೃಗಶಿರಾದಲ್ಲೂ ಜಯಂತಿಯನ್ನು ಆಚರಿಸುತ್ತಾರೆ. ಬುಧವಾರದಲ್ಲಿ ಅಷ್ಟಮೀ ಎರಡೂ ಇದ್ದು ಕೃತ್ತಿಕಾ ಅಥವಾ ಸಪ್ತಮೀ ವೇಧೆ ಇದ್ದರೂ ಬುಧವಾರ ಯೋಗವಿಶೇಷದಿಂದ ಆ ದಿನದಂದೆ ಒಂದು ವರ್ಗದವರು ಹಬ್ಬವನ್ನು ಮಾಡುತ್ತಾರೆ. ಒಟ್ಟಿನಲ್ಲಿ ಜನ್ಮಾಷ್ಟಮಿ, ಶ್ರೀಕೃಷ್ಣ ಜಯಂತಿ ಎಂಬ ಎರಡು ಬಗೆಯೂ ಗೋಕುಲಾಷ್ಟಮಿಗಳೇ, ಆದರೆ ಎರಡೂ ಭಿನ್ನವ್ರತಗಳು. 

	ಶ್ರೀವೈಷ್ಣವ ಪಂಗಡದವರಲ್ಲಿ ಜಯಂತಿ ಎಂದು ಮಾಡುವ ಈ ಹಬ್ಬ ಉಳಿದೆಲ್ಲ ಹಬ್ಬಗಳಿಗಿಂತ ಅಗ್ರಸ್ಥಾನ ಪಡೆದಿದೆ. ದೈಹಿಕ ಶ್ರಮವನ್ನು ಗಮನಿಸದೆ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಅಂದು ಶ್ರೀಕೃಷ್ಣನಿಗೆ ನೈವೇದ್ಯ ಮಾಡುವುದು ಮಾತ್ರವಲ್ಲದೆ ಅದನ್ನು ಇಷ್ಟಮಿತ್ರರೆಲ್ಲರಿಗೂ ಪ್ರಸಾದವಾಗಿ ಹಂಚುವ ರೂಢಿ ಇವರಲ್ಲದೆ. ಪ್ರಸಾದಕ್ಕಾಗಿಯೇ ಈ ಮನೆಗಳಿಗೆ ಜಯಂತಿಯಾದ ಮಾರನೆಯ ದಿವಸ ಓಲಗ ಊದಿಕೊಂಡು ಬರುವ ಪದ್ಧತಿ ಇಂದಿಗೂ ಇದೆ. ಚಕ್ಕುಲಿ, ಎರೆಯಪ್ಪ, ಸುಕ್ಕಿನ ಉಂಡೆ, ಕ್ಷೀರಾನ್ನ -ಇವನ್ನು ತಪ್ಪದೆ ಆ ದಿವಸ ಮಾಡಿ ನಿವೇದನೆ ಮಾಡುತ್ತಾರೆ. 

	ಗೋಕುಲಾಷ್ಟಮಿ ದಿನ ಹಗಲು ಉಪವಾಸವಿದ್ದು ಗೃಹವನ್ನು ಚೊಕ್ಕ ಮಾಡಿ ತಳಿರುತೋರಣಗಳಿಂದ ಅಲಂಕರಿಸಿ ದೇವರ ಸನ್ನಿಧಿಯಲ್ಲಿ ಎಲ್ಲ ವಿಧ ಫಲಗಳನ್ನೂ ಪಲಸ್ತಿಗೆಯಲ್ಲಿ ಕಟ್ಟುತ್ತಾರೆ. ರಾತ್ರಿ ಸ್ನಾನಾಹ್ನಿಕಗಳನ್ನು ಮುಗಿಸಿದ ಬಳಿಕ ಸಂಕಲ್ಪಪೂರ್ವಕ ಶ್ರೀಕೃಷ್ಣನಿಗೆ ವಿಧಿವತ್ತಾಗಿ ಅಭಿಷೇಕ ಮಾಡಿ ವಸ್ತ್ರಾಭರಣ ಚಂದನ ಪುಷ್ಪಗಳಿಂದಲಂಕರಿಸಿ ಧೂಪ ದೀಪಗಳನ್ನು ಸಮರ್ಪಣೆ ಮಾಡಿ ನಾಮಾವಳಿಯಿಂದ ತುಲಸಿ, ಪುಷ್ಪಗಳನ್ನು ಅರ್ಚನೆ ಮಾಡಿ ನೈವೇದ್ಯ. ಮಾಡುತ್ತಾರೆ. ಅರ್ಧರಾತ್ರಿಯಲ್ಲಿ ಚಂದ್ರೋದಯ ಕಾಲಕ್ಕೆ ಸರಿಯಾಗಿ ಎಳನೀರನ್ನು ಶಂಖದಲ್ಲಿಟ್ಟುಕೊಂಡು ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ I ಪಾಂಡ ವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ I ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ I ಗೃಹಾಣಾಘ್ರ್ಯಂ ಮಯಾದತ್ತಂ ದೇವಕೇ ಜನಿತ ಪ್ರಭೂ I ಎಂಬ ಮಂತ್ರದಿಂದ ದೇವಕೀಸಹಿತ ಶ್ರೀಕೃಷ್ಣನಿಗೆ ಅಘ್ರ್ಯಪ್ರದಾನ ಮಾಡುತ್ತಾರೆ. ಅನಂತರ ರೋಹಿಣೀಸಹಿತನಾದ ಚಂದ್ರನನ್ನು ಪೂಜಿಸಿ `ಕ್ಷಿರೋದಾರ್ಣವಸಂಭೂತ ಅತ್ರಿಭೂತಸಮುದ್ಭವ I ರೋಹೀಣೀಶ ಗೃಹಾಣಾಘ್ರ್ಯಂ ರಮಾಭ್ರಾತರ್ಮನಃಪತೇ I ಎಂಬ ಮಂತ್ರದಿಂದ ಅಘ್ರ್ಯ ಕೊಡುತ್ತಾರೆ. 

	ವ್ರತ ಮಾಡುವವರು ಆ ರಾತ್ರಿ ಜಾಗರಣೆ ಇದ್ದು ಮಾರನೆಯ ದಿನ ನಿಯಮದಂತೆ ವ್ರತೋದ್ಯಾಪನ ಮಾಡುತ್ತಾರೆ. ಇದೊಂದು ವಿಧ. ಉತ್ಸವಾಂತ್ಯದಲ್ಲಿ ಪಾರಣೆ ಮಾಡುವುದು ಇನ್ನೊಂದು ವಿಧ. ಇದರಂತೆ ಕೆಲವರು ರಾತ್ರಿಯಲ್ಲೇ ಭೋಜನ ಮಾಡುತ್ತಾರೆ. ಮತ್ತೆ ಕೆಲವರು ಮಾರನೆಯ ಬೆಳಗ್ಗೆ ಸ್ನಾನಾಹ್ನಿಕಗಳನ್ನು ಮುಗಿಸಿದ ಬಳಿಕ ಪಾರಣೆ ಮಾಡುತ್ತಾರೆ. ಅಂದು ನವನೀತ ಪ್ರಿಯನಾದ ಶ್ರೀಕೃಷ್ಣನಿಗ ನವನೀತವನ್ನು ತಪ್ಪದೆ ನಿವೇದಿಸುತ್ತಾರೆ. ಇದರಂತೆ ಗೋಪಾಲಕರಿಗೆ ಪ್ರಿಯವಾದ ಮತ್ತು ಸುಲಭವಾಗಿ ದೊರೆಯುವ ಕಾರೆ, ಕುಡುಗಲೆ ಮತ್ತು ನೇರಳೆ ಹಣ್ಣುಗಳನ್ನು ಗೋಪಾಲನಾದ ಶ್ರೀಕೃಷ್ಣನಿಗೆ ನಿವೇದನ ಮಾಡುವುದು ಇಂದಿಗೂ ನಡೆದು ಬಂದಿದೆ. ಹಬ್ಬವಾದ ಮಾರನೆಯದಿನ ಸಾಯಂಕಾಲ ಶ್ರೀಕೃಷ್ಣನಿಗೆ ತೊಟ್ಟಿಲು ಶಾಸ್ತ್ರವನ್ನೂ ಮಾಡುತ್ತಾರೆ. ದೇವಾಲಯದಲ್ಲಿ ಶ್ರೀಕೃಷ್ಣನ ಉತ್ಸವ ನಡೆದು ಪ್ರತಿನಿತ್ಯವೂ ಶ್ರೀಕೃಷ್ಣನ ಬಾಲಲೀಲೆಗಳನ್ನು ನಿರ್ದೇಶಿಸುವಂತೆ ಅಲಂಕಾರ ಮಾಡಿ ಉತ್ಸವ ಮಾಡುತ್ತಾರೆ. ಪೂತನೀಸಂಹಾರ. ಬಕಸಂಹಾರ, ಶಕಟಾಸುರ ಸಂಹಾರ, ಯಮಳಾರ್ಜುನೀಯ ರಾಸಕ್ರೀಡೆ ಇವುಗಳ ಉತ್ಸವ ಇಂದಿಗೂ ಮೈಸೂರು ಅರಮನೆಯ ಮುಂದಿನ ವೀಧಿಗಳಲ್ಲಿ ನಡೆಯುತ್ತದೆ. ಈ ಉತ್ಸವದಲ್ಲಿ ಕೃಷ್ಣನ ಮುಂದೆ ಹಸುಗಳೂ ಇರುವುದರಿಂದ ಇದನ್ನು ಗೋವಿನ ಉತ್ಸವ ಎಂದೂ ಕರೆಯುತ್ತಾರೆ.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ